ಕಲಬುರಗಿ: ನನ್ನ ತಂಗಿಗೆ ಚುಡಾಯಿಸಬೇಡ, ಆಕೆಯ ತಂಟೆಗೆ ಬರಬೇಡ ಎಂದು ಬುದ್ಧಿವಾದ ಹೇಳಿದ ಅಣ್ಣನಿಗೆ ಯುವಕನೊಬ್ಬ ಚಾಕು ಇರಿದ ಘಟನೆ ಇಲ್ಲಿನ ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಣೆಗಾಂವ ಬಸವನ ತಾಂಡಾದಲ್ಲಿ ನಡೆದಿದೆ. ಅಮರನಾಥ ಚಿನ್ನಾರಾಠೋಡ್ ಎಂಬುವವರಿಗೆ ಪರಶುರಾಮ್ ನಾರಾಯಣ ರಾಠೋಡ್ ಎಂಬಾತನೆ ಚಾಕು ಇರಿದಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಅಮರನಾಥ ಸಹೋದರಿಯನ್ನು ಪರಶುರಾಮ ಆಗಾಗ ಚುಡಾಯಿಸುತ್ತಿದ್ದ. ಇದರಿಂದ ಸಹೋದರ ಅಮರನಾಥ ರಾಠೋಡ್ ಮತ್ತು ಶಿವಾಜಿ ರಾಠೋಡ್ ಅವರು ಪರಶುರಾಮಗೆ ನಮ್ಮ ತಂಗಿಯ ತಂಟೆಗೆ ಬರಬೇಡ ಎಂದು ಬುದ್ಧಿವಾದ ಹೇಳಿದ್ದರು. ಇದರಿಂದ ಕುಪಿತನಾದ ಪರಶುರಾಮನು, ರಾಘವೇಂದ್ರ, ಪ್ರವೀಣ್, ಪ್ರತಾಪ್, ಶೇಖರ್ ಮತ್ತು ರಾಕೇಶ್ ಜೊತೆಗೂಡಿ ಅಮರನಾಥ ಅವರೊಂದಿಗೆ ಜಗಳ ತೆಗೆದು ಅವರ ಹೊಟ್ಟೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಶಿವಾಜಿ ಚಿನ್ನಾರಾಠೋಡ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.