ಕಲಬುರಗಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜೇವರ್ಗಿ ರಸ್ತೆಯಲ್ಲಿನ ಹಸನಾಪುರ ಬಳಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಗು ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.
ಮೌಲಾಬಿ ಎಂಬ ಮಹಿಳೆ ಹೆಸರಿನ ಗುರುತಿನ ಚೀಟಿಯೊಂದು ಸ್ಥಳದಲ್ಲಿ ಪತ್ತೆಯಾಗಿದ್ದರಿಂದ ಮೃತರಲ್ಲಿ ಅವರೂ ಒಬ್ಬರು ಇರಬಹುದು ಎಂದು ಪೊಲೀಸರು ಗುರುತಿಸುತ್ತಿದ್ದಾರೆ. ಉಳಿದಂತೆ ಮೃತರ ಹೆಸರು, ವಿವರ ತಡರಾತ್ರಿಯವರೆಗೂ ಪತ್ತೆಯಾಗಿರಲಿಲ್ಲ. ಬೈಕ್ ಸವಾರ ಹಾಗೂ ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜೇವರ್ಗಿ-ಕಲಬುರಗಿ ಹೆದ್ದಾರಿಯಲ್ಲಿ ಹಸನಾಪುರ ಬಳಿಯಲ್ಲಿ ಬೈಕ್‌ನ್ನು ವೇಗವಾಗಿ ಚಲಾಯಿಸಿಕೊಂಡು ಲಾರಿಗೆ ಬೈಕ್ ಸವಾರ ಕಿನ್ನರ್ ಸೈಡಿನಲ್ಲಿ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಲಾರಿ ಅಡಿಗೆ ಸಿಲುಕಿ, ಸ್ವಲ್ಪ ದೂರ ಎಳೆದುಕೊಂಡು ಹೋಗಿದೆ. ಕೂಡಲೇ ಲಾರಿಯ ಚಾಲಕ ಬ್ರೇಕ್ ಹಾಕಿದಾಗ, ಹಿಂದೆ ವೇಗವಾಗಿ ಬರುತ್ತಿದ್ದ ಕಾರ್ ನಿಯಂತ್ರಣಕ್ಕೆ ಬಾರದೆ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಹೀಗೆ ಸರಣಿಯಾಗಿ ಮೂರು ವಾಹನಗಳ ಮಧ್ಯೆ ಒಂದೇ ಸ್ಥಳದಲ್ಲಿ ಅಪಘಾತಕ್ಕಿದಾಗಿವೆ.
ಗಂಭೀರ ಗಾಯಗೊಂಡಿದ್ದವರು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ತಡರಾತ್ರಿ ಶವಗಳನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಶಿಫ್ಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಪ್ರವೀಣ್ ನಾಯಕ್, ಸಂಚಾರ ಎಸಿಪಿ ಇಸ್ಮಾಯಿಲ್ ಷರೀಫ್, ಇನ್ಸ್ಪೆಕ್ಟರ್ ಮಹಾಂತೇಶ ಪಾಟೀಲ್ ಸೇರಿದಂತೆ ಇತರೆ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಕಲಬುರಗಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.