ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು ಇಂದು (ಏ.16) ನಿಧನ ಹೊಂದಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ತಮ್ಮ 81ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಹಲಬು ದಿನಗಳಿಂದ ಅವರ ಸಾವಿನ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಅವರ ನಿಧನದ ಬಗ್ಗೆ ಪುತ್ರ ಯೋಗೇಶ್ ಅವರೇ ಖಚಿತಪಡಿಸಿದ್ದಾರೆ.
ಅವರ ಸಾವಿನಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕನ್ನಡದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ದ್ವಾರಕೀಶ್ ಅವರು ಇನ್ನಿಲ್ಲ ಎಂಬ ಸುದ್ದಿ ಕೇಳಿ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.
‘ರಾತ್ರಿ ಲೂಸ್ ಮೋಷನ್ ಆಗಿತ್ತು. ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಿಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ಮಲಗಿದ್ದರು. ಮಲಗಿದವರು ಆಮೇಲೆ ಏಳಲೇ ಇಲ್ಲ. ಅವರಿಗೆ ಹೃದಯಾಘಾತವಾಗಿದೆ’ ಎಂದು ದ್ವಾರಕೀಶ್ ಅವರ ಪುತ್ರ ಯೋಗಿಶ್ ಮಾಹಿತಿ ನೀಡಿದ್ದಾರೆ.
ನಿರ್ಮಾಪಕನಾಗಿ, ನಿರ್ದೇಶಕನಾಗಿ ಅವರು ಕನ್ನಡ, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಮಮತೆಯ ಬಂಧನ’ ಅವರ ನಿರ್ಮಾಣದ ಮೊದಲ ಸಿನಿಮಾವಾದರೆ, ‘ವೀರ ಸಂಕಲ್ಪ’ ಎಂಬ ಚಿತ್ರ ಅವರು ನಟಿಸಿದ ಮೊದಲ ಸಿನಿಮಾ ಆಗಿದೆ.
ದ್ವಾರಕೀಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸೇರಿದಂತೆ ಸಿಎಂ, ಸಚಿವರು ಸಹ ಕಂಬನಿ ಮಿಡಿದಿದ್ದಾರೆ.