ಕಲಬುರಗಿ ಸಂಸದ ಡಾ. ಉಮೇಶ್ ಜಾಧವ್ ಅವರ ಬೆಂಬಲಿಗ ಬಿಜೆಪಿ ಯುವ ಮುಖಂಡರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಅಫಜಲ್ಪುರದ ಸಾಗನೂರು ಗ್ರಾಮದಲ್ಲಿ ನಡೆದಿದೆ. ಗಿರೀಶ್ ಚಕ್ರ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದು, ಕೆಲ ದಿನಗಳ ಹಿಂದೆ ಸಂಸದ ಜಾಧವ್ ಆತನನ್ನು BSNL ಸಲಹಾ ಸಮಿತಿ ನಿರ್ದೇಶಕರನ್ನಾಗಿ ಮಾಡಿದ್ದರು.
ಈ ನೇಮಕಾತಿ ನಡೆದ ನಾಲ್ಕು ದಿನಗಳಲ್ಲೇ ಆತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಗಿರೀಶ್ ಚಕ್ರ ಎಂಬಾತನಿಗೆ ಪಾರ್ಟಿ ಕೊಡಿಸುವುದಾಗಿ ನಂಬಿಸಿದ ಆತನ ಗೆಳೆಯರು ಜಮೀನಿಗೆಕರೆದುಕೊಂಡು ಹೋಗಿದ್ದಾರೆ. ಆ ವೇಳೆ ಗೆಳಯರೆಲ್ಲರೂ ಸೇರಿಕೊಂಡು ಗಿರೀಶ್ ಕಣ್ಣಿಗೆ ಖಾರದ ಪುಡಿ ಎರೆಚಿ ಮಾರಕಾಸ್ತ್ರಗಳಿಂದ ಕೊಚ್ಚಿದ್ದಾರೆ. ತೀವ್ರ ಹಲ್ಲೆ ನಡೆಸಿದ್ದರಿಂದ ಗಿರೀಶ್ ಮೃತಪಟ್ಟಿದ್ದಾನೆ. ಸದ್ಯ ಸ್ಥಳಕ್ಕೆ ಗಂಗಾಪುರ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆಂದು ವರದಿಯಾಗಿದೆ.
ಈ ಸುದ್ದಿಗೆ ಪ್ರತಿಕ್ರಿಯಿಸಿದ ಸಂಸದ ಜಾಧವ್, ಗಿರೀಶ್ ಕೊಲೆಯಾಗಿರುವುದು ತಿಳಿದು ನನಗೆ ಭಾರೀ ಆಘಾತವಾಗಿದೆ. ಆತ ನನ್ನ ಕಟ್ಟಾ ಬೆಂಬಲಿಗನಾಗಿದ್ದ ಎಂದು ಭಾವುಕರಾಗಿದ್ದಾರೆ.
ನಟ, ಮಾಜಿ IAS ಅಧಿಕಾರಿ ಕೆ. ಶಿವರಾಮ್ ನಿಧನ.. ಅವರ ಸಾಧನೆಗಳೇನು ಗೊತ್ತಾ?
ನಿನ್ನೆಯಷ್ಟೇ ಆಳಂದ ತಾಲೂಕಿನ ಸರಸಂಬಾದಲ್ಲಿ ಬಿಜೆಪಿ ಮುಖಂಡನೊಬ್ಬನನ್ನು ಹತ್ಯೆ ಮಾಡಲಾಗಿತ್ತು. ಆ ಸುದ್ದಿ ಮಾಸುವ ಮುನ್ನವೇ ಕಲಬುರಗಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿರುವುದು ಜನರಿಗೆ ಬೆಚ್ಚಿಬೀಳಿಸುವಂತೆ ಮಾಡಿದೆ.
ಎರಡೇ ದಿನಗಳಲ್ಲಿ ಬಿಜೆಪಿ ಮುಖಂಡರ ಹತ್ಯೆ ನಡೆದಿರುವುದಕ್ಕೆ ರಾಜಕೀಯ ವಲಯದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.