ಕಲಬುರಗಿ: ಇಲ್ಲಿನ ಡೊಂಗರಗಾಂವದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದ ವತಿಯಿಂದ ನೀಡುವ ಏಳನೇ ವರ್ಷದ 2024ನೇ ಸಾಲಿನ ರಾಜ್ಯಮಟ್ಟದ ಪ್ರತಿಷ್ಠಿತ ‘ಅವ್ವ’ ಪ್ರಶಸ್ತಿಗಳನ್ನು ಘೋಷಿಸಿದೆ.
ಲೇಖಕರು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ ಅವರ “ವೀರ ಸೌಧಾಮಿನಿ ಕಿತ್ತೂರ ರಾಣಿ ಚನ್ನಮ್ಮ” (ಸಂಶೋಧನ ಕೃತಿ ), ಪಾರ್ವತಿ ವಿ ಸೋನಾರೆ ಅವರ “ಓಡಿ ಹೋದಾಕಿ…” (ಕಾದಂಬರಿ) ಹಾಗೂ ಜ್ಯೋತಿ ಬೊಮ್ಮಾ ಅವರ “ಎಲ್ಲರೊಳಗೊಂದಾಗಿ” (ಕವನ ಸಂಕಲನ ) ಕೃತಿಗಳನ್ನು ಅವ್ವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪರಮಪೂಜ್ಯ ಮ. ನಿ. ಪ್ರ. ಶ್ರೀ ಗುರುಪಾದಲಿಂಗ ಶಿವಯೋಗಿಗಳು (ಕೃಷಿ ಹಾಗೂ ಧಾರ್ಮಿಕ ಕ್ಷೇತ್ರ), ಜಯಶ್ರೀ ಬಸವರಾಜ ಮತ್ತಿಮಡು (ಸಮಾಜ ಸೇವೆ ಕ್ಷೇತ್ರ), ಹೋರಾಟಗಾರರಾದ ಡಾ. ಲಕ್ಷ್ಮಣ ದಸ್ತಿ (ಹೋರಾಟ ಕ್ಷೇತ್ರ) ಅವರನ್ನು 2024ನೇ ಸಾಲಿನ ‘ಅವ್ವ ಗೌರವ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ ಕೊನೆಯ ವಾರದಲ್ಲಿ ನಡೆಯಲಿದ್ದು, ಪ್ರಶಸ್ತಿಯು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ಸನ್ಮಾನವನ್ನು ಒಳಗೊಂಡಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.