ಕಲ್ಯಾಣ ಕರ್ನಾಟಕದಲ್ಲಿಯೇ ಪ್ರಪ್ರಥಮವಾಗಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಆಯ್ಕೆಯಾಗಿ ಪ್ರಶಸ್ತಿಗಳನ್ನು ಗಳಿಸಿದ ಕಿರುಚಿತ್ರ “ಪಾಶ” ರಂಗಭೂಮಿ ಕಲಾವಿದರ ಪ್ರಯತ್ನ ಚಲನಚಿತ್ರೋತ್ಸವದಲ್ಲಿ ರಂಗೇರಿದೆ.
ಗಧಾಗ್ರಜ ಫಿಲಂಸ್ ನ ಅಡಿಯಲ್ಲಿ ಈ ಕಿರುಚಿತ್ರ ನಿರ್ಮಾಣಗೊಂಡಿದ್ದು. ರಂಗಭೂಮಿ ಕಲಾವಿದ ಹಾಗೂ ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿರುವ ಲಕ್ಷ್ಮೀಕಾಂತ ಜೋಶಿಯವರು ಚೊಚ್ಚಲ ನಿರ್ದೇಶನ ಮಾಡಿದ್ದಾರೆ.
ಈ ಕಿರುಚಿತ್ರದ ಕತೆ ಹಿರಿಯ ಸಾಹಿತಿ ಹಾಗೂ ನಿರ್ದೇಶಕರಾದ “ಜೋಗಿ” ( ಗಿರೀಶರಾವ ಹತ್ವಾರ ) ಅವರ ಲೈಫ್ ಈಸ್ ಬ್ಯೂಟಿಫುಲ್ ಕೃತಿಯ ಒಂದು ಕತೆಯಾಧಾರಿತವಾಗಿದೆ.
“ಪಾಶ” ಅಂತರಾಷ್ಟ್ರೀಯ ಡೈಮಂಡ್ ಚಲನಚಿತ್ರೋತ್ಸವದಲ್ಲಿ
( ಆನ್ ಲೈನ್ ) ಆಯ್ಕೆಯಾಗಿ , “ಉತ್ತಮ ಕನ್ನಡ ಚಲನಚಿತ್ರ” ಹಾಗೂ “ಉತ್ತಮ ಕತೆ” ಎನ್ನುವ ಎರಡು ವರ್ಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಹಾಗೆಯೇ ದಿನಾಂಕ ಡಿಸೆಂಬರ್ 29 ರಂದು ಬೆಂಗಳೂರಿನಲ್ಲಿ ನಡೆದ “ವಿಡಿಯೋಟೇಪ್ ಚಲನಚಿತ್ರೋತ್ಸವ”ದಲ್ಲಿಯೂ ಆಯ್ಕೆಯಾಗಿ ಅಲ್ಲಿಯೂ ಕೂಡ “ಉತ್ತಮ ಸಾಮಾಜಿಕ ಸಂದೇಶ” ಎನ್ನುವ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಈ ಚಲನಚಿತ್ರೋತ್ಸವದ ಮುಖ್ಯ ಅತಿಥಿಯಾಗಿ ಬಾಲಿವುಡ್ ನಟ ಅನಿರುಧ್ಧ್ ರಾಯ್ ಅವರು ಆಗಮಿಸಿದ್ದರು.
ನಿರ್ದೇಶಕ ಲಕ್ಷ್ಮೀಕಾಂತ ಜೋಶಿ ಈ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಇಡೀ ತಂಡಕ್ಕೆ ಈ ಗೆಲುವನ್ನು ಸಮರ್ಪಿಸಿದ್ದಾರೆ.
ಹಾಗೂ ಇನ್ನಿತರೆ ಚಲನಚಿತ್ರೋತ್ಸವಗಳಲ್ಲಿ “ಪಾಶ” ಭಾಗವಹಿಸಲಿದೆ , ಎಲ್ಲಾ ಅಂದುಕೊಂಡಂತೆ ಆದರೆ, 2024 ರ ಏಪ್ರಿಲ್ ಅಂತ್ಯದಲ್ಲಿ ಅಥವಾ ಮೇ ಮೊದಲ ವಾರದಲ್ಲಿ “ಪಾಶ” ಸಾರ್ವಜನಿಕವಾಗಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಇಡೀ ಚಿತ್ರತಂಡ ರಂಗಭೂಮಿಯವರೇ ಆಗಿದ್ದು ವಿಶೇಷ.
ಮುಖ್ಯಪಾತ್ರದಲ್ಲಿ ನೀನಾಸಂ ಪದವೀಧರ , ಕಿರುತೆರೆಯ ( ಮುಕ್ತ ಮುಕ್ತ , ಮಹಾಸತಿ, ಗಂಗಾ ಧಾರಾವಾಹಿ ಖ್ಯಾತಿಯ ) ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದರೆ , ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ( ಎನ್ ಎಸ್ ಡಿ ) ಪದವೀಧರ ,
ಕಲರ್ಸ್ ಕನ್ನಡ ವಾಹಿನಿಯ , ಕಾಮಿಡಿ ಕಂಪನಿ ಖ್ಯಾತಿಯ ಸೋಮಶಂಕರ್ ಬಿರಾದಾರ ಅವರು ಪ್ರಮುಖ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ.
ರಂಗಾಯಣ ಕಲಾವಿದರಾದ ಉಮೇಶ್ ಪಾಟೀಲ್ , ಶ್ರೀನಿವಾಸ ದೋರನಳ್ಳಿ , ಕೌಶಿಕ್ ಕುಲಕರ್ಣಿ , ಪ್ರದೀಪ ಬೆಳಮಗಿ , ರಿಷಿಕೇಶ ಕುಲಕರ್ಣಿ , ನೀಲಾಂಬಿಕಾ , ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಕುಮಾರಿ ಸ್ಪೂರ್ತಿ ಅಥಣಿ , ಸ್ನೇಹ , ಕಾವ್ಯ , ವೈಷ್ಣವಿ ಬಾಲ ಕಲಾವಿದೆಯರಾಗಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೋಮಶಂಕರ್ ಬಿರಾದಾರ , ಸಹಾಯಕ ನಿರ್ದೇಶಕರಾಗಿ ಅಂಬರೀಶ್ ಮರಾಠಾ ಕಾರ್ಯ ನಿರ್ವಹಿಸಿದ್ದಾರೆ.
ಛಾಯಾಗ್ರಾಹಕರಾಗಿ ರಾಘು ಮರೆನೂರ , ಸಂಕಲನ ಓಂಕಾರ ಮತ್ತು ಭಾಗ್ಯೇಶ್ ಪಾಟೀಲ್ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೂ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ ಸುಚೀನ್ ಶರ್ಮಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.