‘ಪಾಶ’ ಕಿರುಚಿತ್ರ ಗಧಾಗ್ರಜ ಫಿಲಂಸ್ ನ ಅಡಿಯಲ್ಲಿ ನಿರ್ಮಾಣಗೊಂಡಿದ್ದು. ಈ ಕಿರುಚಿತ್ರ ಇತ್ತೀಚೆಗೆ 8 ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಕಲಬುರಗಿಯವರೇ ಆದ ನಿರ್ದೇಶಕ ಲಕ್ಷ್ಮೀಕಾಂತ ಜೋಶಿಯವರು ನಿರ್ದೇಶಿಸಿದ ಚೊಚ್ಚಲ ಚಿತ್ರವಾಗಿದೆ.
ಚಿತ್ರತಂಡದಲ್ಲಿ ಹೆಚ್ಚಿನ ಟೆಕ್ನಿಷನ್ಸ್ ಕಲಬುರಗಿ ಭಾಗದವರೇ ಆಗಿದ್ದು ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿಯನ್ನು ಕಿತ್ತೊಗೆಯಲು ಶ್ರಮಿಸಿ, ಜಯಸಿದ್ದಾರೆ.
ಯಾವೆಲ್ಲ ಪ್ರಶಸ್ತಿ ಬಾಚಿಕೊಂಡಿದೆ ?
‘ಪಾಶ’ ಬೆಂಗಳೂರಿನ “ವಿಡಿಯೋಟೇಪ್ ಫಿಲ್ಮ್ ಫೆಸ್ಟಿವಲ್” ನಲ್ಲಿ ‘ಉತ್ತಮ ಸಾಮಾಜಿಕ ಸಂದೇಶ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಅದೇ ರೀತಿ ಕೊಲ್ಕತ್ತಾದ ಪ್ರತಿಷ್ಠಿತ ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಉತ್ತಮ ಕನ್ನಡ ಕಿರುಚಿತ್ರ’ ಹಾಗೂ ಮುಂಬೈನ “ಜಾಶ್ನೆ ಚಲನಚಿತ್ರೋತ್ಸವ” ದಲ್ಲಿಯೂ ‘ಉತ್ತಮ ಕನ್ನಡ ಕಿರುಚಿತ್ರ’ ಪ್ರಶಸ್ತಿ ಪಡೆದಿದೆ.
ಅಲ್ಲದೆ, ಮಹಾರಾಷ್ಟ್ರದ “ರೀಲ್ಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ” ಉತ್ತಮ ಕಿರುಚಿತ್ರ ” ವಿಭಾಗದಲ್ಲಿ ತನ್ನ ಛಾಪು ಮೂಡಿಸಿದೆ. ಆನ್ ಲೈನ್ ಫೆಸ್ಟಿವಲ್ ಗಳಾದ “ಡೈಮಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ದಲ್ಲಿ “ಉತ್ತಮ ಕತೆ” & “ಐಕಾನಿಕ್ ಶಾರ್ಟ್ ಸಿನಿ ಅವಾರ್ಡ್ಸ್” ನಲ್ಲಿಯೂ “ಉತ್ತಮ ಕತೆ” , “ಉತ್ತಮ ಪ್ರಾಯೋಗಿಕ ಕಿರುಚಿತ್ರ” , “ಉತ್ತಮ ಕನ್ನಡ ಕಿರುಚಿತ್ರ” ವಿಭಾಗದಲ್ಲಿ ಪ್ರಶಸ್ತಿ ದೋಚಿಕೊಂಡಿದೆ.
ಈ ಗೆಲುವಿಗೆ ತಂಡದ ಎಲ್ಲಾ ಸದಸ್ಯರ ಸಹಕಾರ , ಪರಿಶ್ರಮವೇ ಕಾರಣ , ಈ ಗೆಲುವನ್ನ ಅವರೊಂದಿಗೆ ಹಂಚಿಕೊಳ್ಳುವುದಕ್ಕೆ ತುಂಬಾ ಸಂತಸ ಎನಿಸುತ್ತದೆ ಎನ್ನುವುದು ನಿರ್ದೇಶಕ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಮುಖ್ಯಪಾತ್ರದಲ್ಲಿ ಕಿರುತೆರೆಯ ( ಮುಕ್ತ ಮುಕ್ತ , ಮಹಾಸತಿ, ಗಂಗಾ ಧಾರಾವಾಹಿ ಖ್ಯಾತಿಯ ) ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದರೆ , ಕಲರ್ಸ್ ಕನ್ನಡ ವಾಹಿನಿಯ , ಕಾಮಿಡಿ ಕಂಪನಿ ಖ್ಯಾತಿಯ ಸೋಮಶಂಕರ್ ಬಿರಾದಾರ ಅವರು ಪ್ರಮುಖ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ.
ರಂಗಾಯಣ ಕಲಾವಿದರಾದ ಉಮೇಶ್ ಪಾಟೀಲ್ , ಶ್ರೀನಿವಾಸ ದೋರನಳ್ಳಿ , ಕೌಶಿಕ್ ಕುಲಕರ್ಣಿ , ಪ್ರದೀಪ ಬೆಳಮಗಿ , ರಿಷಿಕೇಶ ಕುಲಕರ್ಣಿ , ನೀಲಾಂಬಿಕಾ , ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಕುಮಾರಿ ಸ್ಪೂರ್ತಿ ಅಥಣಿ , ಸ್ನೇಹ , ಕಾವ್ಯ , ವೈಷ್ಣವಿ ಬಾಲ ಕಲಾವಿದೆಯರಾಗಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೋಮಶಂಕರ್ ಬಿರಾದಾರ , ಸಹಾಯಕ ನಿರ್ದೇಶಕರಾಗಿ ಅಂಬರೀಶ್ ಮರಾಠಾ ಕಾರ್ಯ ನಿರ್ವಹಿಸಿದ್ದಾರೆ.
ಛಾಯಾಗ್ರಾಹಕರಾಗಿ ರಾಘು ಮರೆನೂರ , ಸಂಕಲನ ಓಂಕಾರ ಮತ್ತು ಭಾಗ್ಯೇಶ್ ಪಾಟೀಲ್ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುಚೀನ್ ಶರ್ಮಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಈ ಕಿರುಚಿತ್ರಕ್ಕೆ ಹಿರಿಯ ಸಾಹಿತಿ ಹಾಗೂ ನಿರ್ದೇಶಕರಾದ “ಜೋಗಿ” (ಗಿರೀಶರಾವ ಹತ್ವಾರ) ಅವರ ಲೈಫ್ ಈಸ್ ಬ್ಯೂಟಿಫುಲ್ ಕೃತಿಯಲ್ಲಿಯ ಮೊದಲ ಕತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: