ಕಲಬುರಗಿ: ಡಾ.ಸಯ್ಯದ್ ಶಾಹ್ ಖುಸ್ರೊ ಹುಸೈನಿ ಅವರ ಅಗಲಿಕೆಯಿಂದ ನೊಂದಿರುವ ಅವರ ಬಂಧು ಮಿತ್ರರಿಗೆ, ಅನುಯಾಯಿಗಳಿಗೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ವಿಪ ಸದಸ್ಯ ಶಶೀಲ್ ನಮೋಶಿ ಅವರು ಸಂತಾಪ ಸೂಚಿಸಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಹಿತಕ್ಕಾಗಿ 1958 ರಲ್ಲಿ ಖ್ವಾಜಾ ಎಜುಕೇಶನ್ ಸೊಸೈಟಿ ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಆದರೆ ಈಗ ಸಂಸ್ಥೆ ಜಾತಿ,ಮತ, ಧರ್ಮ ಭೇದವಿಲ್ಲದೆ ಎಲ್ಲರ ಉನ್ನತಿಗಾಗಿ ಶ್ರಮಿಸುತ್ತಿದೆ. ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಿರುವ 24ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಹೊಂದಿದೆ. ಈ ಮಟ್ಟಕ್ಕೆ ಬೆಳೆಸಲು ಡಾ. ಖುಸ್ರೋ ಅವರ ಕೊಡುಗೆ ಬಹಳಷ್ಟಿದೆ ಎಂದಿದ್ದಾರೆ.
ದರ್ಗಾ ಮತ್ತು ಸೊಸೈಟಿಯ ಅಧ್ಯಕ್ಷರಾದ ಡಾ. ಖುಸ್ರೋ ಹುಸೇನಿ ಅವರ ದೂರದೃಷ್ಟಿಯು “ಖಾಜಾ ಬಂದನವಾಜ್ ವಿಶ್ವವಿದ್ಯಾಲಯ (ಕೆಬಿಎನ್‌ಯು)” ಎಂಬ ಹೆಸರಿನ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಲ್ಲದೆ, ವೈದ್ಯಕೀಯ, ಎಂಜಿನಿಯರಿಂಗ್, ಬಿ.ಇಡಿ ಕಾಲೇಜುಗಳನ್ನು ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದರು. ಮುಸ್ಲಿಂ ಮಹಿಳೆಯರ ಶಿಕ್ಷಣ ಗಗನಕುಸುಮವಾಗಿರುವ ಸಂದರ್ಭದಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕೆ ಒತ್ತು ನೀಡಿದ್ದ ಸೈಯದ್ ಶಾಹ್ ಖುಸ್ರೋ ಹುಸೇನಿ ಮಹಿಳೆಯರಿಗಾಗಿಯೇ ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಅರೇಬಿಕ್ ಭಾಷೆಯ ಕಾಲೇಜುಗಳನ್ನು ಪ್ರಾರಂಭಿಸಿದ ಕೀರ್ತಿ ಇವರದಾಗಿದೆ ಎಂದು ತಿಳಿಸಿದ್ದಾರೆ. Kalaburaginew
ಖ್ವಾಜಾ ಬಂದೇ ನವಾಝ್ ದರ್ಗಾವನ್ನು ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿಯನ್ನಾಗಿಸಿ, ನಾಡಿನ ಭಾವೈಕ್ಯ ಪರಂಪರೆಯನ್ನು ಮುನ್ನಡೆಸಿಕೊಂಡು ಬಂದ ಅವರು, ಸದಾಕಾಲ ಸಮಾಜದ ಒಳಿತನ್ನೇ ಬಯಸುತ್ತಿದ್ದರು ಎಂದು ನೆನೆದಿದ್ದಾರೆ.