ಕಲಬುರಗಿ:ಸಮಾಜ ಸುಧಾರಣೆಗೆ 12ನೇ ಶತಮಾನದ ಬಸವಾದಿ ಶರಣರ ವಿಚಾರಗಳನ್ನು ಸಾಮಾನ್ಯರಿಗೆ ತಲುಪಸಿವುದರ ಜತೆಗೆ ಹೊಸತನ ಮೂಡಿಸುವ ಸದುದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದಲ್ಲಿ ಜ.19ರಂದು ಆಯೋಜಿಸಲು ಉದ್ದೇಶಿಸಲಾಗಿರುವ ಒಂದು ದಿನದ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕರೂ ಆದ ಹಿರಿಯ ಶರಣ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಪ್ರಸ್ತುತ ಸಂದರ್ಭದಲ್ಲಿ ಸಮಾಜ ಮತ್ತೇ ಮಲೀನಗೊಂಡಿದ್ದು, ಜಾತೀಯತೆ, ಮೂಢನಂಬಿಕೆಗಳು, ಅತ್ಯಚಾರದಂತಹ ಅನೇಕ ಘೋರ ಘಟನೆಗಳು ಜನರ ಮನಸ್ಸುಗಳನ್ನು ಮತ್ತೇ ಆಳಲು ಆರಂಭಿಸಿವೆ. ಮಲೀನಗೊಂಡ ಮನಸ್ಸುಗಳನ್ನು ತಿಳಿಗೊಳಿಸಿ ಅಂಧಕಾರ ಅಳಿಸಿ, ಮನುಷ್ಯತ್ವ ಉಳಿಸಬೇಕಿರುವುದು ಅನಿವಾರ್ಯ. ಸಮಾನತೆಯಿಂದ ಸಾಗಿ ಬಂದ ಅನುಭವ ಮಂಟಪದ ಕಾರ್ಯವೈಖರಿ ಇಂದಿನ ಯುವ ಪೀಳಿಗೆಗೆ ದಾರಿ ಮಾಡಿಕೊಡಬಲ್ಲದು ಎಂಬುದನ್ನು ಈ ಸಮ್ಮೇಳನದ ಮೂಲಕ ತೋರಿಸಲು ಆಶಯವನ್ನು ಹೊಂದಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಜರುಗಿದ ಪದಾಧಿಕಾರಿಗಳು, ವಿಶೇಷ ಆಹ್ವಾನಿತರ ಸಭೆಯಲ್ಲಿ ಗೋದುತಾಯಿ ಮಹಿಳಾ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲರೂ ಆದ ಹಿರಿಯ ಲೇಖಕಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ ಅವರ ಹೆಸರನ್ನು ಅಂತಿಮಗೊಳಿಸಲಾಯಿತು ಎಂದು ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ ತಿಳಿಸಿದ್ದಾರೆ.