ನಿಜವಾದ ಕಲಾವಿದರಿಗೆ ಬೆಲೆನೇ ಇಲ್ಲದಂತಾಗಿದೆ. ಸತತ ಪ್ರಯತ್ನ , ಪರಿಶ್ರಮ , ಪ್ರತಿಭೆಯಿಂದ ಮನರಂಜಿಸೋ ಕಲಾವಿದರನ್ನ , ಪ್ರಜ್ಞಾವಂತಿಕೆ ವೈಚಾರಕತೆ , ಸಂಸ್ಕಾರ , ಸಂಸ್ಕೃತಿ ಅಂತ ಮಾತಾಡೋ ನಾವುಗಳು ಕೈ ಬಿಡ್ತಿದ್ದಿವಾ..?
ಬಟ್ಟೆ ಬಿಚ್ಚಿ ಕೊಡೊ ಪೋಸ್ಗಳಿಗೆ ಲಕ್ಷ ಲಕ್ಷ ಲೈಕ್ಸು , ಅರ್ಥವಿಲ್ಲದ ಅಸಂಬದ್ಧ ಮಾತುಗಳಿಗೆ , ಹಾಸ್ಯದ ಹೊದಿಕೆ ಹೊದ್ದ ಅಶ್ಲೀಲ ಸಂಭಾಷಣೆಗಳನ್ನೊಂಡ ವಿಡಿಯೋಗಳಿಗೆ ಸಾವಿರಾರು ಶೇರ್ಗಳು, ಯಾವುದೇ ರೀತಿಯಿಂದಲೂ ಕಲಾವಂತಿಕೆ ಇರದಿರೋ ವಿಡಿಯೋಗಳನ್ನ ಪ್ರೋತ್ಸಾಹಿಸಿ ಲಕ್ಷ , ಮಿಲಿಯನ್ ಗಳಲ್ಲಿ ವೀಕ್ಷಣೆ.
ಫಾಲೋವರ್ಸ್ ಅನ್ನೋ ಶಬ್ಧದ ಅರ್ಥವೇ ಕಳೆದುಹೋಗಿದೆ ಅನ್ನಿಸ್ತಿದೆ. ಒಂದು ಕಾಲದಲ್ಲಿ ಒಬ್ಬ ವ್ಯಕ್ತಿಯನ್ನ ನಾವು ಫಾಲೋ ಮಾಡಬೇಕು ಅನ್ನೋದಾದ್ರೆ ಆ ವ್ಯಕ್ತಿಯಲ್ಲಿರುವ ವ್ಯಕ್ತಿತ್ವ , ನಡೆ ನಡುವಳಿಕೆ , ಆತ ಮಾಡುವ ಸಮಾಜಮುಖಿ ಕೆಲಸಗಳನ್ನ , ಆತನ ಸಿದ್ಧಾಂತಗಳನ್ನ ಮೆಚ್ಚಿ ಫಾಲೋವರ್ಸ್ ಹುಟ್ಟಿಕೊಳ್ತಿದ್ರು. ಆದ್ರೆ ಈಗ ಯಾವ ಮಟ್ಟಕ್ಕೆ ಬಂದು ನಿಂತಿದೆ ಅಂದ್ರೆ ಬರೀ ಒಂದು ಫೋಟೋ , ಅರ್ಥವಿಲ್ಲದ ವಿಡಿಯೋಗಳಿಂದ ಗಳಿಸಿದ ಜನಸಂಖ್ಯೆಯನ್ನ ಫಾಲೋವರ್ಸ್ ಅಂತ ಕರೆಯೋ ಸ್ಥಿತಿಗೆ ತಲುಪಿದ್ದೀವಿ.
ಈ ರೀಲ್ಸ್ ಗಳಿಂದ ಜನರಲ್ಲಿದ್ದ ತಾಳ್ಮೆ ಶಕ್ತಿಯೂ ಕುಂಠಿತಗೊಂಡಿದೆ. ಈಗ ಯಾರಿಗೂ ಒಂದು ಒಳ್ಳೆ ಸಂದೇಶ ಇರೋ ಸದಭಿರುಚಿಯ ಕಿರುಚಿತ್ರವನ್ನೋ , ಸಿನಿಮಾವನ್ನೋ ಅರ್ಧ ಗಂಟೆ , ಎರಡೂವರೆ ಗಂಟೆಯ ತನಕ ಕೂಳಿತು ನೋಡುವ ವ್ಯವಧಾನವೇ ಉಳಿದಿಲ್ಲ ಎಲ್ಲವೂ ಕೆಲವೇ ಸೆಕೆಂಡುಗಳಲ್ಲೇ ಮುಗಿಯಬೇಕು. ಹೀಗಾಗಿಯೇ ಒಳ್ಳೊಳ್ಳೆ ಸಿನಿಮಾಗಳು ಬಂದರೂ ಗೆಲ್ಲುತ್ತಿಲ್ಲ , ಚಿತ್ರೋದ್ಯಮ ಬಡವಾಗಿದೆ. ನಿರ್ಮಾಪಕರುಗಳು ಸಿನಿಮಾಗಳಿಗೆ ಹೂಡಿಕೆ ಮಾಡೊಕೆ ಮುಂದೆ ಬರ್ತಿಲ್ಲ. ಸಿನಿಮಾವನ್ನೇ ಬದುಕು ಮಾಡಿಕೊಂಡ ಎಷ್ಟೊ ಕಲಾವಿದರು , ನಿರ್ದೇಶಕರು , ತಂತ್ರಜ್ಞರು ತಾವು ಕಂಡ ಕನಸುಗಳನ್ನೆಲ್ಲ ಸಾಯಿಸಿಕೊಂಡು ದಿನನಿತ್ಯದ ಜೀವನ ಸಾಗಿಸೋಕೆ ಬೇರೆ ಕೆಲಸ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ.
ಗ್ಯಾಸ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್..!
ನಾವೆಲ್ಲ ಯಾಕೆ ಇಷ್ಟರ ಮಟ್ಟಿಗೆ ಬಂದು ತಲುಪಿದ್ದೆವೆ ? ಒಂದು ಕತೆಯಲ್ಲಿರುವ ಭಾವಾಭಿವ್ಯಕ್ತಿ , ರಸಸ್ವಾದ , ಅದರಲ್ಲಿರುವ ಸಂದೇಶವನ್ನ ಕೆಲವು ಸೆಕೆಂಡುಗಳಲ್ಲೇ ನಮ್ಮೆದುರಲ್ಲಿ ಪ್ರಕಟವಾಗವಾಗಬೇಕು ಅಂತ ಬಯಸುವುದು ಹೇಗೆ ಸಾಧ್ಯ ? ಯಾವುದೇ ಕತೆಗೆ ತನ್ನದೇ ಆದ ಚಲನೆಯ ತೀವ್ರತೆ ಇರುತ್ತೆ. ಕತೆಯ ಜೊತೆಗೆ ನಾವು ಸಾಗಬೇಕು ಹೊರೆತು ನಮ್ಮ ಜೊತೆ ಕತೆ ಸಾಗಿಬರಲ್ಲ.
ಶತ ಶತಮಾನಗಳಿಂದ ದಿವ್ಯ ಘನತೆ ಹೊಂದಿರುವ ಕಲೆ , ಸಂಗೀತ , ಸಾಹಿತ್ಯ , ನಾಟಕ , ಲಲಿತಕಲೆಗಳನ್ನ ಇವತ್ತು ನಾವು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದ್ದೀವಿ..? ಸಮಾಜವನ್ನ ಯಾವ ದಿಕ್ಕಿನತ್ತ ತೆಗೆದುಕೊಂಡು ಹೋಗ್ತಾ ಇದೀವಿ. ಈ ಅರ್ಥವಿಲ್ಲದ ರೀಲ್ಸ್ ಗಳ ಅಬ್ಬರದಿಂದ ಶತಮಾನಗಳ ಇತಿಹಾಸವಿರುವ ಮಹಾನ್ ಕಲೆಗಳನ್ನ ನಾವು ಇವತ್ತು ಹೂತು ಹಾಕಿ ಅವಮಾನ ಮಾಡುತ್ತಿದ್ದೇವೆ. ಇದಕ್ಕೆಲ್ಲ ಕಾರಣ ನಮ್ಮ ಆಲೋಚನಾ ಮಟ್ಟ ಕ್ಷೀಣಿಸಿರುವುದು. ಯಾವುದನ್ನ ಪ್ರೋತ್ಸಾಹಿಸಬೇಕು. ಬೆಂಬಲಿಸಬೇಕು ಅನ್ನೋದನ್ನೇ ಮರೆತಿದ್ದಿವಿ. ಬೇಡದಿರುವುದಕ್ಕೆಲ್ಲ ಪ್ರಚೋದನೆ ಕೊಡ್ತಿದ್ದಿವಿ. ಇದಕ್ಕೆ ಸರಿಯಾಗಿ ನಮ್ಮ ಸಾಮಾಜಿಕ ಜಾಲತಾಣದ ಅಡ್ಮಿನ್ಗಳು , ಇವರಂತೂ ತಮ್ಮ ನೈತಿಕತೆ ಕಳೆದುಕೊಂಡು ಬರೀ ಪ್ರಚಾರಕ್ಕಾಗಿ , ಹಣದಾಸೆಗಾಗಿ ತಮ್ಮ ಕರ್ತವ್ಯದ ಮಾನದಂಡಗಳನ್ನೇ ಮರೆತಿದ್ದಾರೆ.
ತಮ್ಮ ಪಾಡಿಗೆ ತಾವು ಆರಾಮಾಗಿರೋ ಅಮಾಯಕರು , ಮುಗ್ಧ ಜನಗಳು ಎಲ್ಲೋ ಮಾತಾಡಿದ್ದೋ , ಅಥವಾ ಯಾವುದೋ ಸಂಧರ್ಭದಲ್ಲಿ ಆಕಸ್ಮಿಕವಾಗಿ ನಡೆದ ಸಂಭಾಷಣೆಗಳನ್ನೇ ದೊಡ್ಡ ಮಟ್ಟದಲ್ಲಿ ಟ್ರೋಲ್ ಮಾಡಿ ಜನಪ್ರಿಯತೆ ಕೊಡಿಸಿಬಿಡ್ತಾರೆ. ಆದ್ರೆ ಮುಂದೇನು…? ಅವರಿಗೆ ಸಿಕ್ಕ ಆ ಸ್ಥಾನಮಾನ ಉಳಿಸಿಕೊಂಡು ಹೋಗುವ ಶಕ್ತಿಯಾಗಲಿ , ಅರ್ಹತೆಯಾಗಲಿ ಅವರಲ್ಲಿ ಇರುತ್ತದಾ..? ಮುಂದೆ ಸ್ವಲ್ಪ ದಿನದಲ್ಲಿ ಆ ಬಿಸಿ ಇಳಿದಾಗ ಮತ್ತೆ ಮೊದಲಿನ ಸ್ಥಿತಿಗೆ ಬರ್ತಾರೆ , ಈ ಅವಸ್ಥೆಯಿಂದ ಸಹಜಸ್ಥಿತಿಗೆ ಬರಲಾಗದೆ ಒದ್ದಾಡ್ತಾರೆ. ಇದಕ್ಕೆ ಉದಾಹರಣೆಗಳಾಗಿ ಎಷ್ಟೋ ಜನ ನಮ್ಮ ಕಣ್ಣು ಮುಂದೆ ಮೂರು ದಿನದ ಜಾತ್ರೆ ಮುಗಿಸಿ ಪರದೆ ಹಿಂದೆ ಸರಿದು ಹೋದವರಿದ್ದಾರೆ. ಇವರನ್ನ ಬಳಸಿಕೊಂಡು ಎಷ್ಟೋ ಜನ ದುಡ್ಡು ಮಾಡಿಕೊಂಡವರೂ ಇದ್ದಾರೆ. ಪಾಪ ಏನೂ ಅರಿಯದ ಆ ಮುಗ್ಧರ ಪಾಡೇನು?
ಇದರಿಂದ ಯಾರಿಗೆ ಉಪಯೋಗವಾದಂತಾಯಿತು..? ಈ ಕಡೆ ಇವರೂ ಬೆಳೆಯಲು ಆಗಲ್ಲ , ಆ ಕಡೆ ಅರ್ಹತೆ ಇರೋ ಕಲಾವಿದರಿಗೂ ಪ್ರೋತ್ಸಾಹ ಸಿಗ್ತಿಲ್ಲ. ನಿಜವಾದ ಪ್ರತಿಭೆಗಳನ್ನ ಪ್ರೋತ್ಸಾಹಿಸಿದ್ರೆ ಅವರಿಗೂ ಒಂದು ಸಾರ್ಥಕತೆ , ಸಮಾಜಕ್ಕೂ ನಮ್ಮಿಂದ ಒಂದು ಕೊಡುಗೆಯೂ ಕೊಟ್ಟಂತೆ ಅಲ್ವಾ..? ಏನಂತಿರಾ…?
– ಲಕ್ಷ್ಮಿಕಾಂತ್ ಜೋಶಿ, ಕಲಬುರಗಿ